ಗ್ಲ್ಯಾಸ್ಗೋ - 
ಸ್ಕಾಟ್ಲೆಂಡಿನ ಒಂದು ನಗರ. ರಾಯಲ್ ಮತ್ತು ಪಾರ್ಲಿ ಮೆಂಟರಿ ಬರೋ, ಬಂದರು, ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರ. ಕ್ಲೈಡ್ ನದಿಯ ಮುಖದಿಂದ 20ಮೈ. ಮೇಲಕ್ಕೆ, ಅದರ ಎರಡೂ ದಂಡೆಗಳ ಮೇಲೆ ಇದೆ. ಇಲ್ಲಿಂದ ಎಡಿನ್‍ಬರಾ ನಗರಕ್ಕೆ 44ಮೈ. ಲಂಡನಿಗೆ 396ಮೈ. ಇದರ ವಿಸ್ತೀರ್ಣ 60.4ಚ.ಮೈ. ಜನಸಂಖ್ಯೆ 10,54,913 (1961). ನಗರದ ಮುಖ್ಯ ವಾಣಿಜ್ಯ ಮತ್ತು ಆಡಳತ ಕಟ್ಟಡಗಳು ಕ್ಲೈಡ್ ನದಿಯ ಉತ್ತರ ದಡದ ಮೇಲಿವೆ. ಗ್ಲ್ಯಾಸ್ಗೋದ ಸುತ್ತಲೂ ಹಲವು ಉಪನಗರಗಳಿವೆ. ಗ್ಲ್ಯಾಸ್ಗೋದ ಕಾರ್ಮಿಕ ಜನ ನಗರದ ಮಧ್ಯದಲ್ಲಿ ಸಾಂದ್ರೀಕೃತ ರಾಗಿದ್ದಾರೆ. ಎರಡನೆಯ ಮಹಾಯುದ್ಧ ನಂತರ ಇವರಿಗೆ ನಗರದ ಹೊರವಲಯಗಳಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. 

ಗ್ಲ್ಯಾಸ್ಗೋದಲ್ಲಿ 19ನೆಯ ಶತಮಾನದಲ್ಲಿ ಕೈಗಾರಿಕೆಗಳು ಬೆಳೆದಂತೆ ಹಳೆಯ ಕಟ್ಟಡಗಳನ್ನು ಕೆಡವಿಹಾಕಲಾಯಿತು. 18ನೆಯ ಶತಮಾನಕ್ಕಿಂತ ಹಿಂದಿನ ಕಟ್ಟಡಗಳು ಹಲವಿಲ್ಲ. ದಿ ಕ್ರಾಸ್ ಅಥವಾ ಟಾಲ್ ಬೂತ್ ಗೋಪುರ (1627), ಕೆಥಿಡ್ರಲ್, ಟ್ರಾನ್ಸ್ ಗೋಪುರ (1637), ಟ್ರೇಡ್ಸ್‍ಹಾಲ್ (1791), ಸ್ಟರ್ಲಿಂಗ್ ಗ್ರಂಥಾಲಯ, ಹಚಿಸನ್ ಆಸ್ಪತ್ರೆ, ಗೋರ್ಬಾಲ್ಟ್ ಪ್ಯಾರಿಷ್ ಚರ್ಚ್ (1803), ಅಂಚೆ ಕಛೇರಿ (1877), ಗ್ಲ್ಯಾಸ್ಗೋ ಕಲಾಶಾಲೆ ಇವು ಕೆಲವು ಹಳೆಯ ಕಟ್ಟಡಗಳು.
ಗ್ಲ್ಯಾಸ್ಗೋ ವಿಶ್ವವಿದ್ಯಾಲಯ 1451ರಲ್ಲಿ ಎರಡನೆಯ ಜೇಮ್ಸ್ ದೊರೆಯ ಕಾಲದಲ್ಲಿ ಸ್ಥಾಪಿತವಾಯಿತು. ಗ್ಲ್ಯಾಸ್ಗೋ ಬಿಷಪ್ ವಿಲಿಯಂ ಟರ್ನ್‍ಬುಲ್ ಇದರ ಪ್ರಥಮ ಕುಲಾಧಿಪತಿಯಾಗಿದ್ದ . 1632-1660ರಲ್ಲಿ ವಿಶ್ವವಿದ್ಯಾಲಯಕ್ಕೆ ಹೊಸ ಕಟ್ಟಡ ನಿರ್ಮಾಣವಾಯಿತು. ರಾಯಲ್ ವಿಜ್ಞಾನ ಮತ್ತು ತಾಂತ್ರಿಕ ಕಾಲೇಜು, ಸ್ಕಾಟಿಷ್ ವಾಣಿಜ್ಯ ಕಾಲೇಜು (1845), ಗ್ಲ್ಯಾಸ್ಗೋ ಕಲಾಶಾಲೆ ರಾಯಲ್ ಸ್ಕಾಟಿಷ್ ಸಂಗೀತಶಾಲೆ(1874), ಸ್ಕಾಟ್ಲೆಂಡ್ ಕೃಷಿ ಕಾಲೇಜು (1899), ಟ್ರಿನಿಟಿ ಕಾಲೇಜು (1875), ಗ್ಲ್ಯಾಸ್ಗೋ ಮತ್ತು ಪಶ್ಚಿಮ ಸ್ಕಾಟ್ಲೆಂಡ್ ಗೃಹವಿಜ್ಞಾನ ಕಾಲೇಜು (1875), ಸೇಂಟ್ ಅಲೋಯ್ಷಿಯಸ್ ಬಾಲಕರ ಕಾಲೇಜು (1859), ನಾಟ್ರ್‍ಡಾಂ ಬಾಲಕಿಯರ ಪ್ರೌಢಶಾಲೆ (1897), ಗ್ಲ್ಯಾಸ್ಗೋ ಪ್ರೌಢಶಾಲೆ (1450) ಇವು ಇಲ್ಲಿಯ ಮುಖ್ಯ ಶಾಲಾಕಾಲೇಜುಗಳು.

ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ಗ್ರಂಥಭಂಡಾರದ ಜೊತೆಗೆ ಗ್ಲ್ಯಾಸ್ಗೋ ಪೌರಸಭಾ ಸಾರ್ವಜನಿಕ ಗ್ರಂಥಾಲಯ ಪ್ರಸಿದ್ಧವಾದ್ದು. ಪ್ರತಿಶಾಲೆ ಅಥವಾ ಕಾಲೇಜಿನಲ್ಲೂ ಉಪಯುಕ್ತ ಗ್ರಂಥಭಂಡಾರಗಳಿವೆ. ನಗರದಲ್ಲಿ ವಸ್ತು ಸಂಗ್ರಹಾಲಯ, ಪ್ರಾಣಿ ಸಂಗ್ರಹಾಲಯ, ಚಿತ್ರ ಸಂಗ್ರಾಹಲಯ ಮತ್ತು ಸುಂದರ ಉದ್ಯಾನಗಳು ಇವೆ. ಭೂಗರ್ಭ ರೈಲು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸುವ್ಯವಸ್ಥಿತ ಹೆದ್ದಾರಿಗಳು ಇವು ನಗರದ ಸಾರಿಗೆ ಸೌಲಭ್ಯಗಳು. 

ಗ್ಲ್ಯಾಸ್ಗೋ ಪಶ್ಚಿಮ ಸ್ಕಾಟ್ಲೆಂಡಿನ ಮುಖ್ಯ ಮಾರುಕಟ್ಟೆ. ಇಲ್ಲಿಯ ವರ್ತಕರು ಇಂಗ್ಲೆಂಡ್, ಐರ್ಲೆಂಡ್, ಫ್ರಾನ್ಸ್ ಮತ್ತು ನಾರ್ವೆ ದೇಶಗಳೊಡನೆ 17 ನೆಯ ಶತಮಾನದಿಂದ ಸಂಬಂಧ ಪಡೆದಿದ್ದರು. ಹೊಗೆಸೊಪ್ಪಿನ ವ್ಯಾಪಾರದಿಂದ ಗ್ಲ್ಯಾಸ್ಗೋ ಹೆಚ್ಚುಗಳಿಸಿತು. ಅಮೆರಿಕ ಕ್ರಾಂತಿಯಿಂದಾಗಿ ಈ ವ್ಯಾಪರಕ್ಕೆ ಧಕ್ಕೆ ಒದಗಿತು. ಕೈಗಾರಿಕಾ ಕ್ರಾಂತಿ ಆರಂಭವಾದ ಮೇಲೆ 19 ನೆಯ ಶತಮಾನದಲ್ಲಿ ಗ್ಲ್ಯಾಸ್ಗೋ ಹೊ ಕೈಗಾರಿಕೆಗಳ ಬೀಡಾಯಿತು. ಹಡಗು ನಿರ್ಮಾಣ, ರಾಸಾಯನಿಕ ವಸ್ತು ತಯಾರಿಕೆ, ಇದ್ದಿಲು-ಕಬ್ಬಿಣ ಗಣಿಗಾರಿಕೆ, ಬಟ್ಟೆ, ಕಾಗದ, ಹೊಗೆಸಪ್ಪು, ಆಹಾರ ತಯಾರಿಕೆ ಮುಂತಾದವು ಬೆಳೆದವು.

ಗ್ಲ್ಯಾಸ್ಗೋ ನಗರದಲ್ಲೇ ಕ್ಲೈಡ್ ನದಿಗೆ ಹನ್ನೊಂದು ಸೇತುಗಳಿವೆ. ಸರಕು ಸಾಗಿಸಲು ನದಿ ಉಪಯುಕ್ತವಾಗಿದೆ. ಹಡಗುಗಳು ನದಿಯಲ್ಲಿ ಸದಾ ಸಂಚಾರಿಸುತ್ತಿರುತ್ತವೆ.

ಗ್ಲ್ಯಾಸ್ಗೋ ನಗರದ ಸುತ್ತಲೂ ಶಿಲಾ ಮತ್ತು ಲೋಹ ಯುಗಗಳ ಅವಶೇಷಗಳು ದೊರಕಿವೆ. 6 ಮತ್ತು 7ನೆಯ ಶತಮಾನಗಳಿಂದಲೇ ಈ ನಗರದ ಉಲ್ಲೇಖವಿದೆ. ಸೇಂಟ್ ಕೇಂಟಿಜೆರ್ನ್ ಸು. 550ರಲ್ಲಿ ಇಲ್ಲಿಗೆ ಬಂದು ಈ ಜಿಲ್ಲೆಯ ಜನರನ್ನು ಮತಾಂತರಗೊಳಿಸಲು ಯತ್ನಿಸಿದ. ಗ್ಲ್ಯಾಸ್ಗೋದ ಪ್ರಥಮ ಕೆಥಿಡ್ರಲನ್ನು ಕಟ್ಟಿಸಿದ ಸ್ಕಾಂಟ್ಲೆಂಡಿನ 1 ನೆಯ ಡೇವಿಡ್ ದೊರೆ ತನ್ನ ಗುರು ಜಾನ್ ಆಕಿಯಾಸನನ್ನು ಗ್ಲ್ಯಾಸ್ಗೋ ಚರ್ಚಿನ ಬಿಷಪ್ ಆಗಿ ನೇಮಿಸಿದ. ಸ್ಕಾಂಟ್ಲೆಂಡಿನ 2 ನೆಯ ಜೇಮ್ಸ್ 1450 ರಲ್ಲಿ ಈನಗರವನ್ನು ಬರೋ ಆಗಿ ಮಾನ್ಯಮಾಡಿದ. ಸ್ಕಾಂಟ್ಲೆಂಡಿನ 6ನೆಯ ಜೆಮ್ಸ್ ದೊರೆ (ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡಿನ 1ನೆಯ ಜೇಮ್ಸ್) ಮತ್ತು 1ನೆಯ ಚಾಲ್ರ್ಸ್ ದೊರೆ ಈ ನಗರವನ್ನು ರಾಯಲ್ ಬರೋ ಆಗಿ ಮಾಡಿದರು.

ಆಲಿವರ್ ಕ್ರಾಮ್ವೆಲ್ ಡನ್‍ಬಾರ್ ಬಳಿ ಸ್ಕಾಟರನ್ನು ಸೋಲಿಸಿದ ಅನಂತರ 1650ರಲ್ಲಿ ಗ್ಲ್ಯಾಸ್ಗೋ ನಗರಕ್ಕೆ ಭೇಟಿ ಕೊಟ್ಟ. 1689ರಲ್ಲಿ ಅವನು ಗ್ಲ್ಯಾಸ್ಗೋ ಬಿಷಪನ ಅಧಿಕಾರವನ್ನು ಕೊನೆಗೊಳಸಿ ಅದಕ್ಕೆ ಸ್ವತಂತ್ರ ನಗರ ಸಮಿತಿಯನ್ನು ಸ್ಥಾಪಿಸಿದ. ಸ್ಕಾಟ್ಲೆಂಡ್ ಚರ್ಚಿನ ಮೊದಲ ಮಹಾಸಭೆ ಗ್ಲ್ಯಾಸ್ಗೋದಲ್ಲಿ ಸೇರಿ(1638) ಪ್ರೆಸ್ಬಿಟೀರಿಯನಿಸಮನನ್ನು ಸ್ಕಾಟಿಷ್ ಚರ್ಚ್ ಸರ್ಕಾರವ್ಯವಸ್ಥೆಯಾಗಿ ಘೋಷಿಸಿತು. ಗ್ಲ್ಯಾಸ್ಗೋದ ಪ್ರಥಮ ಪತ್ರಿಕೆ ಗ್ಲ್ಯಾಸ್ಗೋ ಕೂರ್ಯಾಂಟ್ 1715ರಲ್ಲಿ ಆರಂಭವಾಯಿತು.

(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ